ನಾನು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿದ್ದೇನಷ್ಟೆ…ಮುಂದೇನು?ನಾನು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿದ್ದೇನಷ್ಟೆ…ಮುಂದೇನು?

ಅಭಿನಂದನೆಗಳು! ನೀವು ಜೀವನವನ್ನು ಬದಲಾಯಿಸುವ ನಿರ್ಧಾರವನ್ನು ಕೈಗೊಂಡಿದ್ದೀರಿ! ಪ್ರಾಯಶಃ ನೀವು ಕೇಳುತ್ತಿದ್ದೀರಿ, ”ಮುಂದೇನು? ನಾನು ದೇವರೊಂದಿಗಿನ ಪಯಣವನ್ನು ಹೇಗೆ ಪ್ರಾರಂಭಿಸುವುದು? ”ಕೆಳಗೆ ಉಲ್ಲೇಖಿಸಿರುವ ಐದು ಹಂತಗಳು ನಿಮಗೆ ಬೈಬಲ್ ಇಂದ ಮಾರ್ಗದರ್ಶನವನ್ನು ನೀಡುತ್ತವೆ. ನಿಮ್ಮ ಪಯಣದಲ್ಲಿ ನಿಮಗೆ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು www.GotQuestions.org/Kannada ಅನ್ನು ಸಂಪರ್ಕಿಸಿ.

1. ನೀವು ಮೋಕ್ಷಪ್ರಾಪ್ತಿಯನ್ನು ಅರ್ಥಮಾಡಿಕೊಂಡಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

1 ಜಾನ್ 5:13 ನಮಗೆ ಹೇಳುತ್ತಾರೆ, “ನಾನು ಇವುಗಳನ್ನು ಯಾರು ದೇವರ ಪುತ್ರನನ್ನು ನಂಬುತ್ತಾರೋ ಅವರಿಗೋಸ್ಕರ ಬರೆಯುತ್ತಿದ್ದೇನೆ, ಇದರಿಂದ ನಿಮಗೆ ನಿತ್ಯ ಜೀವನ ಇರುವುದನ್ನು ನೀವು ತಿಳಿಯಬಹುದು.” ನಾವು ರಕ್ಷಣೆಯನ್ನು ಅರ್ಥಮಾಡಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ನಾವು ರಕ್ಷಿಸಲ್ಪಟ್ಟಿದ್ದೇವೆ ಎಂಬ ಅತ್ಮವಿಶ್ವಾಸವನ್ನು ಹೊಂದಿರಬೇಕೆಂದು ದೇವರು ಬಯಸುತ್ತಾನೆ. ಸಂಕ್ಷೇಪವಾಗಿ, ರಕ್ಷಣೆಯ ಪ್ರಧಾನ ಅಂಶಗಳನ್ನು ನೋಡೋಣ:

(a) ನಾವೆಲ್ಲಾ ಪಾಪಕೃತ್ಯವನ್ನು ಮಾಡಿದ್ದೇವೆ. ನಾವೆಲ್ಲಾ ದೇವರಿಗೆ ಅಪ್ರಿಯವಾದ ಕಾರ್ಯವನ್ನು ಮಾಡಿದ್ದೇವೆ (ರೋಮನ್ಸ್ 3:23).

(b) ನಾವು ಮಾಡಿದ ಪಾಪಕ್ಕಾಗಿ, ನಾವು ಎಂದೆಂದಿಗೂ ದೇವರಿಂದ ಬೇರ್ಪಡುವ ಶಿಕ್ಷೆಗೆ ಅರ್ಹರಾಗಿದ್ದೇವೆ (ರೋಮನ್ಸ್ 6:23).

(c) ನಾವು ಮಾಡಿದ ಪಾಪದ ದಂಡ ತೆರುವ ಸಲುವಾಗಿ ಯೇಸುವು ಶಿಲುಬೆಗೇರಿ ಮರಣ ಹೊಂದಿದನು(ರೋಮನ್ಸ್ 5:8; 2 ಕರಿಂತಿಯನ್ಸ್ 5:21). ನಮಗೆ ಸಲ್ಲಬೇಕಾದ ಶಿಕ್ಷೆಯನ್ನು ತಾನು ಪಡೆದು, ಯೇಸುವು ನಮ್ಮ ಪರವಾಗಿ ಮರಣ ಹೊಂದಿದನು. ಅವನ ಪುನರುತ್ಥಾನವು ನಮ್ಮ ಪಾಪವನ್ನು ಭರಿಸಲು ಯೇಸುವಿನ ಮರಣವೇ ಸಾಕಾಗಿತ್ತು ಎಂಬುದನ್ನು ಸಮರ್ಥಿಸುತ್ತದೆ.

(d) (ಡಿ) ಯಾರು ಯೇಸುವಿನಲ್ಲಿ ನಂಬಿಕೆಯನ್ನಿಡುತ್ತಾರೋ ಅವರಿಗೆಲ್ಲಾ ದೇವರು ಕ್ಷಮೆ ಮತ್ತು ರಕ್ಷಣೆಯನ್ನು ಅನುಗ್ರಹಿಸುತ್ತಾನೆ –ನಮ್ಮ ಪಾಪಗಳ ದಂಡವನ್ನು ಅವನ ಮರಣವೇ ಭರಿಸುತ್ತದೆ ಎಂದು ನಂಬುತ್ತಾ(ಜಾನ್ 3:16; ರೋಮನ್ಸ್ 5:1; ರೋಮನ್ಸ್ 8:1).

ಇದೇ ಮೋಕ್ಷದ ಸಂದೇಶ! ನೀವು ಯೇಸು ಕ್ರಿಸ್ತನು ನಿಮ್ಮ ಉದ್ಧಾರಕನೆಂದು ನಂಬಿಕೆ ಹೊಂದಿದ್ದಲ್ಲಿ ನೀವು ರಕ್ಷಿಸಲ್ಪಡುತ್ತೀರಿ! ನಿಮ್ಮ ಎಲ್ಲಾ ಪಾಪಗಳೂ ವಿಮೋಚಿಸಲ್ಪಡುತ್ತವೆ, ಹಾಗೂ ದೇವರು ನಿಮ್ಮನ್ನು ಬಿಡುವುದಿಲ್ಲ ಅಥವಾ ತ್ಯಜಿಸುವುದಿಲ್ಲ ಎಂಬ ಭರವಸೆ ನೀಡುತ್ತಾನೆ (ರೋಮನ್ಸ್ 8:38-39; ಮ್ಯಾಥ್ಯೂ 28:20). ನೆನಪಿಡಿ, ನಿಮ್ಮ ರಕ್ಷಣೆಯು ಯೇಸು ಕ್ರಿಸ್ತನಲ್ಲಿ ಭದ್ರವಾಗಿರುತ್ತದೆ(ಜಾನ್ 10:28-29). ನೀವು ಕೇವಲ ಯೇಸು ಕ್ರಿಸ್ತನು ನಿಮ್ಮ ಉದ್ಧಾರಕನೆಂದು ನಂಬಿಕೆ ಹೊಂದಿದ್ದಲ್ಲಿ ನೀವು ಸ್ವರ್ಗದಲ್ಲಿ ನಿತ್ಯಜೀವನವನ್ನು ದೇವರೊಂದಿಗೆ ಕಳೆಯುತ್ತೀರಿ ಎಂಬ ಆತ್ಮವಿಶ್ವಾಸವನ್ನು ಹೊಂದಬಹುದು!

2. ಬೈಬಲ್ ಅನ್ನು ಚೆನ್ನಾಗಿ ಬೋಧಿಸುವ ಚರ್ಚ್ ನ್ನು ಹುಡುಕಿಕೊಳ್ಳಿ.

ಇಗರ್ಜಿಯನ್ನು ಬರೇ ಕಟ್ಟಡವೆಂದು ಭಾವಿಸಬೇಡಿ. ಇಗರ್ಜಿ ಎಂಬುದು ಜನರ ಸಮೂಹ. ಯೇಸುಕ್ರಿಸ್ತನನ್ನು ನಂಬುವವರು ಒಬ್ಬರಿಗೊಬ್ಬರು ಸೌಹಾರ್ದದಿಂದ ವರ್ತಿಸುವರು ಎಂಬುದು ಬಹಳ ಮುಖ್ಯ. ಅದು ಇಗರ್ಜಿಯ ಮೂಲಭೂತ ಧ್ಯೇಯಗಳಲ್ಲೊಂದು. ಈಗ ನೀವು ಯೇಸು ಕ್ರಿಸ್ತನ ಮೇಲೆ ನಂಬಿಕೆಯನ್ನು ಹೊಂದಿದ್ದೀರಿ,ನಾವು ನಿಮಗೆ ನಿಮ್ಮ ಪ್ರದೇಶದಲ್ಲಿರುವ ಬೈಬಲ್ ನ್ನು ನಂಬುವ ಇಗರ್ಜಿಯನ್ನು ಹುಡುಕಲು ಮತ್ತು ಪಾದ್ರಿಯೊಂದಿಗೆ ಮತನಾಡಲು ಪ್ರೋತ್ಸಾಹಿಸುತ್ತೇವೆ. ಯೇಸು ಕ್ರಿಸ್ತನ ಬಗ್ಗೆ ನಿಮಗಿರುವ ಹೊಸ ನಂಬಿಕೆಯ ಬಗ್ಗೆ ಅವರಿಗೂ ತಿಳಿಯಲಿ.

ಇಗರ್ಜಿಯ ಎರಡನೇ ಉದ್ದೇಶ ಬೈಬಲ್ ನ್ನು ಬೋಧಿಸುವುದು. ದೇವರ ಸೂಚನೆಗಳನ್ನು ಹೇಗೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬುದನ್ನು ಕಲಿಯಬಹುದು. ಬೈಬಲ್ ನ್ನು ಅರ್ಥಮಾಡಿಕೊಳ್ಳುವುದೇ ಯಶಸ್ವೀ ಹಾಗೂ ಪ್ರಭಾವೀ ಕ್ರೈಸ್ತಧರ್ಮೀಯ ಜೀವನವನ್ನು ಹೋಂದುವ ಸಾಧನ.. 2 ಟಿಮಥಿ 3:16-17 ಹೇಳುತ್ತದೆ, “ಎಲ್ಲಾ ಬೈಬಲ್ ನ ಸೂಕ್ತಿಗಳೂ ದೇವರಿಂದ ಸೂಚಿಸಲ್ಪಟ್ಟವುಗಳು ಮತ್ತು ಅವು ಬೋಧಿಸಲು, ಗದರಿಸಲು, ಸರಿಪಡಿಸಲು, ಮತ್ತು ನ್ಯಾಯಯುತವದ ರೀತಿಯಲ್ಲಿ ತರಬೇತು ನೀಡಲು ಉಪಯುಕ್ತವಾಗಿದೆ, ಇದರಿಂದ ಒಬ್ಬ ಭಕ್ತನನ್ನು ಪೂರ್ಣ ಪ್ರಮಾಣವಾಗಿ ಒಳ್ಳೆಯ ಕೆಲಸಗಳನ್ನು ಮಾಡಲು ಸಜ್ಜುಗೊಳಿಸಬಹುದು.”

ಇಗರ್ಜಿಯ ಮೂರನೇ ಉದ್ದೇಶ ಆರಾಧಿಸುವುದು. ಆರಾಧಿಸುವುದೆಂದರೆ ದೇವರು ಮಾಡಿರುವ ಎಲ್ಲಾ ಕೆಲಸಗಳಿಗೂ ಧನ್ಯವಾದವನ್ನು ಅರ್ಪಿಸುವುದು! ದೇವರು ನಮ್ಮನ್ನು ರಕ್ಷಿಸಿದ್ದಾನೆ. ದೇವರು ನಮ್ಮನ್ನು ಪ್ರೀತಿಸುತ್ತಾನೆ. ದೇವರು ನಮಗೆ ಒದಗಿಸುತ್ತಾನೆ. ದೇವರು ನಮಗೆ ದಾರಿ ತೋರಿಸುತ್ತಾನೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾನೆ. ನಾವು ಹೇಗೆ ಅವನಿಗೆ ಧನ್ಯವಾದ ಅರ್ಪಿಸದೇ ಇರಲಾದೀತು? ದೇವರು ಪವಿತ್ರ, ಸದ್ಗುಣಶೀಲನೂ, ಪ್ರೀತಿಪತ್ರನೂ, ಕರುಣಾಮಯನೂ, ಘನತೆಯನ್ನು ಹೊಂದಿರುವವನೂ ಆಗಿದ್ದಾನೆ. ಪ್ರಕರಣ 4:11 ಘೋಷಿಸುತ್ತದೆ ““ ನೀನು ಗಣ್ಯನು, ನೀನೇ ನಮ್ಮ ಒಡೆಯ ಮತ್ತು ದೇವರು, ಘನತೆ ಮತ್ತು ಮರ್ಯಾದೆ ಮತ್ತು ಶಕ್ತಿಯನ್ನು ಪಡೆಯಲು, ನೀನು ಎಲ್ಲಾ ವಸ್ತುಗಳನ್ನು ಸೃಷ್ಟಿಸಿರುವೆ, ಹಾಗೂ ನಿನ್ನ ಆಶಯದಂತೆ ಅವೆಲ್ಲಾ ಸೃಷ್ಟಿಸಲ್ಪಡುತ್ತಿವೆ ಮತ್ತು ಅಸ್ತಿತ್ವದಲ್ಲಿವೆ.”

3. ಪ್ರತೀ ದಿನವೂ ದೇವರ ಬಗ್ಗೆ ಕೇಂದ್ರೀಕರಿಸಲು ಸಮಯವನ್ನು ಗೊತ್ತುಪಡಿಸಿ.

ನಾವು ದಿನವೂ ದೇವರ ಕುರಿತು ಕೇಂದ್ರೀಕರಿಸುವ ಸಮಯವನ್ನು ವ್ಯಯಿಸುವುದು ಬಹಳ ಮುಖ್ಯವಾಗಿರುತ್ತದೆ. ಕೆಲವರು ಇದನ್ನು “ನಿಶ್ಶಬ್ದವಾದ ಸಮಯ” ಎಂದು ಕರೆಯುತ್ತಾರೆ.ಇನ್ನು ಕೆಲವರು “ಭಕ್ತಿ,” ಯಾಕೆಂದರೆ ಈ ಸಮಯದಲ್ಲಿ ನಾವು ನಮ್ಮನ್ನು ದೇವರಿಗೆ ಮುಡಿಪಾಗಿಡುತ್ತೇವೆ. ಕೆಲವರು ಬೆಳಗಿನ ಹೊತ್ತು ಸಮಯವನ್ನು ಹೊಂದಿಸುತ್ತಾರೆ,ಇನ್ನು ಕೆಲವರು ಸಂಜೆಯ ಸಮಯವನ್ನು ನೇಮಿಸುತ್ತಾರೆ. ನೀವು ಈ ಸಮಯವನ್ನು ಏನೆಂದು ಕರೆಯುತ್ತೀರಿ ಮತ್ತು ಯಾವಾಗ ಹೊಂದಿಸುತ್ತೀರಿ ಎಂಬುದು ಗಣನೆಗೆ ಬರುವುದಿಲ್ಲ. ಯಾವುದು ಗಣನೆಗೆ ತೆಗೆದುಕೊಳ್ಳಬೇಕಾದುದೆಂದರೆ ನೀವು ಕಾಯಂ ಆಗಿ ದೇವರೊಡನೆ ಸಮಯವನ್ನು ಕಳೆಯುವುದು. ಯಾವ ಸಂಗತಿಯು ನಮ್ಮ ಸಮಯವನ್ನು ದೇವರೊಂದಿಗೆ ಕಳೆಯುವಂತೆ ಮಾಡುತ್ತದೆ?

(ಎ) ಪ್ರಾರ್ಥನೆ. ಪ್ರಾರ್ಥನೆಯು ಕೇವಲ ದೇವರೊಂದಿಗೆ ಮಾತನಾಡುವುದು. ದೇವರೊಂದಿಗೆ ನಿಮಗೆ ಸಂಬಧಿಸಿದ ಹಾಗೂ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ. ನಿಮಗೆ ಬುದ್ಧಿವಂತಿಕೆ ಮತ್ತು ಮಾರ್ಗದರ್ಶನ ನೀಡುವಂತೆ ದೇವರಲ್ಲಿ ಕೇಳಿಕೊಳ್ಳಿ. ನಿಮ್ಮ ಅಗತ್ಯಗಳನ್ನು ಪೂರೈಸಲು ಕೇಳಿಕೊಳ್ಳಿ. ನೀವು ದೇವರನ್ನು ಎಷ್ಟು ಪ್ರೀತಿಸುತ್ತೀರಿ ಮತ್ತು ಅವನು ನಿಮಗೋಸ್ಕರ ಮಾಡುವ ಕೆಲಸಗಳಿಗೆ ಎಷ್ಟು ಬೆಲೆ ಕಟ್ಟುತ್ತೀರಿ ಎಂದು ಅವನಲ್ಲಿ ಹೇಳಿ. ಪ್ರಾರ್ಥನೆ ಎಂದರೆ ಅದೇ.

(ಬಿ)ಬೈಬಲ್ ಓದುವುದು. ಇಗರ್ಜಿಯಲ್ಲಿ ಕಲಿಸಲ್ಪಡುವ ಬೈಬಲ್, ರವಿವಾರದ ಶಾಲೆ, ಮತ್ತು/ಅಥವಾ ಬೈಬಲ್ ಅಧ್ಯಯನ – ಜೊತೆಗೆ ನೀವು ಬೈಬಲ್ ನ್ನು ನಿಮಗೋಸ್ಕರ ಓದಬೇಕು. ಬೈಬಲ್ ನಲ್ಲಿ ನಿಮಗೆ ಸಫಲವಾದ ಕ್ರೈಸ್ತಧರ್ಮೀಯ ಜೀವನ ನಡೆಸಲು ಬೇಕಾಗುವ ಎಲ್ಲಾ ಅಂಶಗಳೂ ಇವೆ. ಇದು ಹೇಗೆ ವಿವೇಕವುಳ್ಳ ನಿರ್ಧಾರವನ್ನು ಕೈಗೊಳ್ಳುವುದು, ಹೇಗೆ ದೇವರ ಇಚ್ಛೆಯನ್ನು ತಿಳಿಯುವುದು, ಹೇಗೆ ಇನ್ನೊಬ್ಬರಿಗೆ ನೆರವಾಗುವುದು, ಮತ್ತು ಹೇಗೆ ಆಧ್ಯಾತ್ಮಿಕವಾಗಿ ಬೆಳೆಯುವುದು ಎಂಬುದನ್ನು ಒಳಗೊಂಡಿದೆ. ಬೈಬಲ್ ನಮಗೆ ದೇವರ ನುಡಿ. ಬೈಬಲ್ ಹೇಗೆ ನಮ್ಮ ಜೀವನವನ್ನು ದೇವರಿಗೆ ಸಂತೋಷವಾಗುವಂತೆ, ಮತ್ತು ನಮಗೆ ತೃಪ್ತಿಕರವಾಗುವಂತೆ ನಡೆಸುವುದು ಎಂಬುದರ ಬಗ್ಗೆ ಅತ್ಯವಶ್ಯಕವಾದ ದೇವರ ಸೂಚನೆಯನ್ನೊಳಗೊಂಡ ಕೈಪಿಡಿ.

4. ಯಾರು ನಿಮಗೆ ಆಧ್ಯಾತ್ಮಿಕವಾಗಿ ಸಹಾಯ ಮಾಡಬಲ್ಲರೋ ಅವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಿ.

1 ಕರಿಂತಿಯನ್ಸ್ 15:33 ನಮಗೆ ಹೇಳುತ್ತದೆ, “ ತಪ್ಪಾದ ದಾರಿಯಲ್ಲಿ ನಡೆಯಬೇಡಿ: ’ ಕೆಟ್ಟ ಜೊತೆಗಾರರು ಒಳ್ಳೆಯ ಗುಣಗಳನ್ನು ಕೆಡಿಸುತ್ತಾರೆ.’” ಬೈಬಲ್ “ದುಷ್ಟ” ಜನರು ನಮ್ಮ ಮೇಲೆ ಬೀರಬಹುದಾದ ಪ್ರಭಾವಗಳ ಬಗ್ಗೆ ಎಚ್ಚರಿಕೆಯನ್ನು ಒಳಗೊಂಡಿದೆ. ಯಾರು ಪಾಪಮಯ ಚತುವಟಿಕೆಗಳಲ್ಲಿ ಮಗ್ನರಾಗಿರುತ್ತಾರೋ ಅಂತವರೊಂದಿಗೆ ಕಾಲ ಕಳೆಯುವುದರಿಂದ ನಾವು ಅಂತಹ ಕೆಲಸಗಳಲ್ಲಿ ಪ್ರಲೋಭನೆಗೊಳ್ಳುವಂತೆ ಮಾಡುತ್ತದೆ. ನಮ್ಮ ಸುತ್ತಮುತ್ತಲಿರುವವರ ಗುಣಗಳು ನಮಗೆ ವರ್ಗಾಯಿಸಲ್ಪಡುತ್ತವೆ.ಆದ್ದರಿಂದ ನಮ್ಮನ್ನು ನಾವು ಯಾರು ದೇವರನ್ನು ಪ್ರೀತಿಸುತ್ತಾರೆ ಮತ್ತು ಅವನಿಗೆ ಬದ್ಧನಾಗಿರುತ್ತಾರೆ ಅಂತವರಿಂದ ಸುತ್ತುವರಿಯಲ್ಪಡುವಂತೆ ನೋಡಿಕೊಳ್ಳಬೇಕು.

ಯಾರು ನಿಮಗೆ ಸಹಾಯ ಮಾಡಬಲ್ಲರೋ ಮತ್ತು ಯಾರು ನಿಮ್ಮನ್ನು ಪ್ರೋತ್ಸಾಹಿಸಬಲ್ಲರೋ ಅಂತಹ ಒಬ್ಬ ಅಥವಾ ಇಬ್ಬರು ಸ್ನೇಹಿತರನ್ನು ನಿಮ್ಮ ಚರ್ಚ್ ನಲ್ಲಿ ಹುಡುಕಲು ಪ್ರಯತ್ನಿಸಿ (ಹೀಬ್ರೂಸ್ 3:13; 10:24). ನಿಮ್ಮ ಶಾಂತವಾದ ಸಮಯ, ನಿಮ್ಮ ಚಟುವಟಿಕೆಗಳು, ಮತ್ತು ನಿಮ್ಮ ದೇವರೊಂದಿಗಿನ ಪಯಣದಲ್ಲಿ ನಿಮ್ಮ ಲಕ್ಷ್ಯವಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀವೇ ಹೊರುವಂತೆ ಮಾಡಲು ನಿಮ್ಮ ಸ್ನೇಹಿತನಲ್ಲಿ ಕೇಳಿಕೊಳ್ಳಿ. ನೀವೂ ಅವರನ್ನು ಹಾಗೆ ನೋಡಿಕೊಳ್ಳಬಹುದೇ ಎಂದು ಕೇಳಿ. ಇದರ ಅರ್ಥ ನಿಮ್ಮ ಯಾವ ಸ್ನೇಹಿತರಿಗೆ ಯೇಸುವು ಅವರ ರಕ್ಷಕನೆಂದು ತಿಳಿದಿಲ್ಲವೋ ಅವರನ್ನು ಬಿಟ್ಟುಬಿಡಬೇಕೆಂದಲ್ಲ. ಅವರೊಂದಿಗಿನ ಗೆಳೆತನವನ್ನು ಮುಂದುವರಿಸಿ ಮತ್ತು ಅವರನ್ನು ಪ್ರೀತಿಸಿ. ಯೇಸುವು ನಿಮ್ಮ ಜೀವನವನ್ನು ಬದಲಾಯಿಸಿದ್ದಾನೆ ಮತ್ತು ನೀವು ಮೊದಲು ಮಾಡುತ್ತಿದ್ದ ಎಲ್ಲ ಕೆಲಸಗಳನ್ನು ಈಗ ಮಾಡಲಾಗದು ಎಂದು ಸುಮ್ಮನೆ ತಿಳಿಯಪಡಿಸಿ. ಯೇಸುವಿನ ಬಗ್ಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅವಕಾಶವನ್ನು ಕಲ್ಪಿಸುವಂತೆ ದೇವರಲ್ಲಿ ಬೇಡಿಕೊಳ್ಳಿ.

5. ಪರಿಶುದ್ಧರಾಗಿರಿ.

ಬಹಳಷ್ಟು ಜನರಲ್ಲಿ ದೀಕ್ಷಾಸ್ನಾನದ ಬಗ್ಗೆ ತಪ್ಪು ಗ್ರಹಿಕೆ ಇದೆ. “ದೀಕ್ಷಾಸ್ನಾನ” ಎಂದರೆ ನೀರಿನಲ್ಲಿ ಮುಳುಗುವುದು ಎಂದರ್ಥ. ದೀಕ್ಷಾಸ್ನಾನ ಎಂದರೆ ಬೈಬಲ್ ಗೆ ಸಂಬಂಧಿಸಿದಂತೆ ನಿಮ್ಮ ಕ್ರಿಸ್ತನ ಬಗೆಗಿರುವ ಹೊಸ ನಂಬಿಕೆಯನ್ನು ಮತ್ತು ಅವನನ್ನು ಬದ್ಧತೆಯಿಂದ ಅನುಸರಿಸುವುದನ್ನು ಸಾರ್ವಜನಿಕವಾಗಿ ಪ್ರಕಟಪಡಿಸುವುದು. ನೀರಿನಲ್ಲಿ ಒಂದಾಗಿ ಮುಳುಗುವ ಕ್ರಿಯೆಯ ಅರ್ಥ ಕ್ರಿಸ್ತನೊಂದಿಗೆ ಹುಗಿಯಲ್ಪಡುವುದು. ನೀರಿನಿಂದ ಮೇಲೆ ಬರುವ ಕ್ರಿಯೆಯು ಕ್ರಿಸ್ತನ ಪುನರುತ್ಥಾನವನ್ನು ಚಿತ್ರೀಕರಿಸುತ್ತದೆ. ದೀಕ್ಷಾಸ್ನಾನಕ್ಕೆ ಒಳಪಡುವುದೆಂದರೆ ನಿಮ್ಮನ್ನು ನೀವು ಕ್ರಿಸ್ತನ ಮರಣ, ಹುಗಿಯುವಿಕೆ ಮತ್ತು ಪುನರುತ್ಥಾನದಲ್ಲಿ ಗುರುತಿಸುವುದು (Romans 6:3-4).

ದೀಕ್ಷಾಸ್ನಾನವು ನಿಮ್ಮನ್ನು ರಕ್ಷಿಸುವುದಲ್ಲ. ದೀಕ್ಷಾಸ್ನಾನವು ನಿಮ್ಮ ಪಾಪಗಳನ್ನು ತೊಳೆಯುವುದಿಲ್ಲ. ದೀಕ್ಷಾಸ್ನಾನವು ನೀವು ವಿಧೇಯರಾಗುವ ಒಂದು ಹಂತ, ಏಕಾಂತವಾಗಿ ಕ್ರಿಸ್ತನ ಬಗೆಗಿರುವ ಮುಕ್ತಿಮಾರ್ಗದ ನಂಬಿಕೆಯನ್ನು ಸಾರ್ವಜನಿಕವಾಗಿ ಪ್ರಕಟಪಡಿಸುವುದು. ದೀಕ್ಷಾಸ್ನಾನವು ತುಂಬಾ ಮುಖ್ಯವಾದುದು ಯಾಕೆಂದರೆ ಇದು ವಿಧೇಯತೆಯ ಒಂದು ಹಂತ. ನೀವು ದೀಕ್ಷಾಸ್ನಾನಕ್ಕೆ ತಯಾರಿದ್ದಲ್ಲಿ ನೀವು ಪಾದ್ರಿಗಳಲ್ಲಿ ಆ ಬಗ್ಗೆ ಮಾತನಾಡಬೇಕು.


ಕನ್ನಡ ಹೋಮ್ ಪೇಜ್ ಗೆ ಹಿಂದಿರುಗಿ


ನಾನು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿದ್ದೇನಷ್ಟೆ…ಮುಂದೇನು?