ಪ್ರಶ್ನೆ
ಯೇಸುವನ್ನು ನಿಮ್ಮ ವೈಯಕ್ತಿಕ ರಕ್ಷಕನನ್ನಾಗಿ ಅಂಗೀಕರಿಸುವುದು ಎಂದರೇನು?
ಉತ್ತರ
ನೀವು ಯೇಸು ಕ್ರಿಸ್ತನನ್ನು ನಿಮ್ಮ ವೈಯಕ್ತಿಕ ರಕ್ಷಕನನ್ನಾಗಿ ಅಂಗೀಕರಿಸಿದ್ದೀರೋ? ಈ ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಮೊದಲು ನೀವು “ಯೇಸು ಕ್ರಿಸ್ತನು,” “ವೈಯಕ್ತಿಕ,” ಮತ್ತು “ರಕ್ಷಕನು” ಎಂಬ ಪದಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಯೇಸು ಕ್ರಿಸ್ತನು ಯಾರು? ಅನೇಕ ಜನರು ಯೇಸು ಕ್ರಿಸ್ತನನ್ನು ಒಬ್ಬ ಒಳ್ಳೆಯ ಮನುಷ್ಯನು, ಮಹಾನ್ ಬೋಧಕನು, ಅಥವಾ ದೇವರ ಪ್ರವಾದಿ ಎಂದು ಒಪ್ಪಿಕೊಳ್ಳುತ್ತಾರೆ. ಈ ಸಂಗತಿಗಳು ಯೇಸುವನ್ನು ಕುರಿತು ಖಂಡಿತವಾಗಿ ನಿಜವಾಗಿವೆ, ಆದರೆ ಅವು ಆತನು ನಿಜವಾಗಿ ಯಾರಾಗಿದ್ದಾನೆಂದು ಸಂಪೂರ್ತಿಯಾಗಿ ನಿರೂಪಿಸುವದಿಲ್ಲ. ದೇವರು ಯೇಸುವಿನಲ್ಲಿ ಶರೀರಧಾರೆ ಮತ್ತು ದೇವರು ಮಾನವ ರೂಪದಲ್ಲಿ ಇದ್ದಾನೆಂದು ಸತ್ಯವೇದವು ಹೇಳುತ್ತದೆ (ಯೋಹಾನ 1:1, 14). ನಮಗೆ ಬೋಧಿಸಲು, ನಮ್ಮನ್ನು ಗುಣಪಡಿಸಲು, ನಮ್ಮನ್ನು ತಿದ್ದಲು, ನಮ್ಮನ್ನು ಕ್ಷಮಿಸಲು ಮತ್ತು ನಮಗಾಗಿ ಸಾಯಲು ದೇವರು ಭೂಮಿಗೆ ಬಂದನು! ಯೇಸು ಕ್ರಿಸ್ತನು ಸೃಷ್ಟಿಕರ್ತನಾದ ದೇವರೂ ಸರ್ವೋತ್ತಮನೂ ಆಗಿದ್ದಾನೆ. ಈ ಯೇಸುವನ್ನು ನೀವು ಅಂಗೀಕರಿಸಿದ್ದೀರಾ?
ರಕ್ಷಕನು ಎಂದರೇನು, ಮತ್ತು ನಮಗೆ ಯಾಕೆ ರಕ್ಷಕನು ಬೇಕಾಗಿದ್ದಾನೆ? ನಾವೆಲ್ಲರೂ ಪಾಪ ಮಾಡಿ ಕೆಟ್ಟ ಕೃತ್ಯಗಳನ್ನು ನಡಿಸಿದ್ದೇವೆ ಎಂದು ಸತ್ಯವೇದವು ನಮಗೆ ಹೇಳುತ್ತದೆ (ರೋಮಾ 3:10-18). ನಮ್ಮ ಪಾಪದ ಪರಿಣಾಮವಾಗಿ, ನಾವು ದೇವರ ಕೋಪ ಮತ್ತು ನ್ಯಾಯತೀರ್ಪಿಗೆ ಅರ್ಹರಾಗಿದ್ದೇವೆ. ಕೊನೆಯಿಲ್ಲದ ಮತ್ತು ನಿತ್ಯನಾದ ದೇವರಿಗೆ ವಿರುದ್ಧವಾಗಿ ಮಾಡಿದ ಪಾಪಗಳಿಗೆ ಒಂದೇ ನ್ಯಾಯವಾದ ಶಿಕ್ಷೆ ಎಂದರೆ ಕೊನೆಯಿಲ್ಲದ ಶಿಕ್ಷೆಯಾಗಿದೆ (ರೋಮಾ 6:23; ಪ್ರಕಟನೆ 20:11-15). ಆದುದರಿಂದಲೇ ನಮಗೆ ರಕ್ಷಕನು ಬೇಕಾಗಿದ್ದಾನೆ!
ಯೇಸು ಕ್ರಿಸ್ತನು ಭೂಮಿಗೆ ಬಂದು ನಮ್ಮ ಸ್ಥಾನದಲ್ಲಿ ಸತ್ತನು. ಯೇಸುವಿನ ಮರಣವು ನಮ್ಮ ಪಾಪಗಳಿಗಾಗಿ ಕೊಟ್ಟ ಮಿತಿಯಿಲ್ಲದ ಕ್ರಯವಾಗಿದೆ (2 ಕೊರಿಂಥ 5:21). ನಮ್ಮ ಪಾಪಗಳಿಗಾಗಿ ದಂಡವನ್ನು ತೆರಲು ಯೇಸು ಸತ್ತನು (ರೋಮಾ 5:8). ನಾವು ಕೊಡದೆ ಇರುವುದಕ್ಕಾಗಿ ಯೇಸು ಕ್ರಯವನ್ನು ಕೊಟ್ಟನು. ಮರಣದಿಂದ ಪುನರುತ್ಥಾನವಾದ ಯೇಸುವಿನ ಕಾರ್ಯವು ನಮ್ಮ ಪಾಪಗಳಿಗಾಗಿ ದಂಡವನ್ನು ತೆರಲು ಸಾಕಷ್ಟು ಎಂದು ಆತನ ಮರಣವು ರುಜುವಾತುಪಡಿಸಿತು. ಆದುದರಿಂದಲೇ ಯೇಸು ಒಬ್ಬನೇ ರಕ್ಷಕನಾಗಿದ್ದಾನೆ (ಯೋಹಾನ 14:6; ಅಪೊಸ್ತಲರ ಕೃತ್ಯಗಳು 4:12)! ಯೇಸು ನಿಮ್ಮ ರಕ್ಷಕನೆಂದು ನೀವು ನಂಬುತ್ತಿದ್ದೀರಾ?
ಯೇಸು ನಿಮ್ಮ “ವೈಯಕ್ತಿಕ” ರಕ್ಷಕನೋ? ಸಭೆಗೆ ಹಾಜರಾಗುವುದು, ಸಂಪ್ರದಾಯಗಳನ್ನು ನೆರವೇರಿಸುವುದು, ಮತ್ತು/ಅಥವಾ ಕೆಲವು ಪಾಪಗಳನ್ನು ಮಾಡದೆ ಇರುವುದನ್ನು ಅನೇಕ ಜನರು ಕ್ರೈಸ್ತತ್ವ ಎಂದು ದೃಷ್ಟಿಸುತ್ತಾರೆ. ಇದು ಕ್ರೈಸ್ತತ್ವವಲ್ಲ. ನಿಜವಾದ ಕ್ರೈಸ್ತತ್ವವು ಯೇಸುವಿನೊಂದಿಗಿರುವ ವೈಯಕ್ತಿಕ್ತ ಸಂಬಂಧವಾಗಿದೆ. ಯೇಸುವನ್ನು ನಿಮ್ಮ ವೈಯಕ್ತಿಕ ರಕ್ಷಕನಾಗಿ ಅಂಗೀಕರಿಸುವುದು ಎಂದರೆ ನಿಮ್ಮ ಸ್ವಂತ ವೈಯಕ್ತಿಕ ನಂಬಿಕೆ ಮತ್ತು ಭರವಸೆಯನ್ನು ಆತನಲ್ಲಿ ಇಡುವುದಾಗಿದೆ. ಬೇರೆಯವರ ನಂಬಿಕೆಯಿಂದ ಯಾರೂ ರಕ್ಷಣೆ ಹೊಂದುವದಿಲ್ಲ. ಕೆಲವು ಕ್ರಿಯೆಗಳನ್ನು ಮಾಡುವುದರಿಂದ ಯಾರೂ ಕ್ಷಮಾಪಣೆ ಹೊಂದುವದಿಲ್ಲ. ರಕ್ಷಣೆ ಹೊಂದಲು ಒಂದೇ ಒಂದು ಮಾರ್ಗವೆಂದರೆ ವೈಯಕ್ತಿಕವಾಗಿ ಯೇಸುವನ್ನು ನಿಮ್ಮ ರಕ್ಷಕನನ್ನಾಗಿ ಅಂಗೀಕರಿಸುವುದು, ನಿಮ್ಮ ಪಾಪಗಳಿಗಾಗಿ ಕ್ರಯವೆಂದು ಆತನ ಮರಣದಲ್ಲಿ ಮತ್ತು ಆತನ ಪುನರುತ್ಥಾನವು ನಿಮ್ಮ ನಿತ್ಯಜೀವಕ್ಕೆ ಖಾತರಿಯಾಗಿದೆ ಎಂದು ಭರವಸೆಯಿಡುವುದಾಗಿದೆ (ಯೋಹಾನ 3:16). ಯೇಸು ವೈಯಕ್ತಿಕವಾಗಿ ನಿಮ್ಮ ರಕ್ಷಕನಾಗಿದ್ದಾನೋ?
ಯೇಸು ಕ್ರಿಸ್ತನನ್ನು ನಿಮ್ಮ ವೈಯಕ್ತಿಕ ರಕ್ಷಕನನ್ನಾಗಿ ಅಂಗೀಕರಿಸಲು ನೀವು ಬಯಸುವುದಾದರೆ, ಈ ಮುಂದಿನ ಮಾತುಗಳನ್ನು ದೇವರಿಗೆ ಹೇಳಿರಿ. ನೆನಪಿಡಿ, ಈ ಪ್ರಾರ್ಥನೆ ಅಥವಾ ಬೇರೆ ಪ್ರಾರ್ಥನೆಯನ್ನು ಹೇಳುವುದರಿಂದ ಇದು ನಿಮ್ಮನ್ನು ರಕ್ಷಿಸುವದಿಲ್ಲ. ಯೇಸು ಕ್ರಿಸ್ತನಲ್ಲಿ ಮತ್ತು ಆತನು ಶಿಲುಬೆಯ ಮೇಲೆ ಮುಗಿಸಿದ ಕಾರ್ಯದಲ್ಲಿ ನಂಬಿಕೆಯಿಡುವುದರಿಂದ ಮಾತ್ರ ನೀವು ನಿಮ್ಮ ಪಾಪದಿಂದ ರಕ್ಷಿಸಲ್ಪಡಬಹುದು. ಆತನಲ್ಲಿಟ್ಟಿರುವ ನಿಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಮತ್ತು ನಿಮಗೆ ರಕ್ಷಣೆಯನ್ನು ಒದಗಿಸಿದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸಲು ಈ ಪ್ರಾರ್ಥನೆಯು ಒಂದು ಸರಳವಾದ ರೀತಿಯಾಗಿದೆ. “ದೇವರೇ, ನಾನು ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಮತ್ತು ನಾನು ಶಿಕ್ಷೆಗೆ ಅರ್ಹನಾಗಿದ್ದೇನೆಂದು ತಿಳಿದಿದ್ದೇನೆ. ಆದರೆ ನನಗೆ ಆಗ ಬೇಕಾದ ಶಿಕ್ಷೆಯನ್ನು ಯೇಸು ಕ್ರಿಸ್ತನು ತೆಗೆದುಕೊಂಡನು, ಇದರಿಂದ ಆತನಲ್ಲಿಟ್ಟಿರುವ ನಂಬಿಕೆಯ ಮೂಲಕ ನನಗೆ ಕ್ಷಮಾಪಣೆ ಉಂಟಾಗಬಹುದು. ನಿನ್ನ ಕ್ಷಮಾಪಣೆಯ ಅನುಗ್ರಹವನ್ನು ನಾನು ಸ್ವೀಕರಿಸುತ್ತೇನೆ ಮತ್ತು ರಕ್ಷಣೆಗಾಗಿ ನಿನ್ನಲ್ಲಿ ನನ್ನ ಭರವಸೆಯಿಡುತ್ತೇನೆ. ಯೇಸುವನ್ನು ನನ್ನ ವೈಯಕ್ತಿಕ ರಕ್ಷಕನೆಂದು ನಾನು ಅಂಗೀಕರಿಸುತ್ತೇನೆ! ನಿನ್ನ ಅದ್ಬುತವಾದ ಕೃಪೆ ಮತ್ತು ಕ್ಷಮಾಪಣೆಗಾಗಿ – ನಿತ್ಯಜೀವದ ವರಕ್ಕಾಗಿ ನಿನಗೆ ವಂದನೆ! ಆಮೆನ್!”
ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
English
ಯೇಸುವನ್ನು ನಿಮ್ಮ ವೈಯಕ್ತಿಕ ರಕ್ಷಕನನ್ನಾಗಿ ಅಂಗೀಕರಿಸುವುದು ಎಂದರೇನು?