settings icon
share icon
ಪ್ರಶ್ನೆ

ಮರಣದ ನಂತರ ಏನಾಗುತ್ತದೆ?

ಉತ್ತರ


ಕ್ರೈಸ್ತ ನಂಬಿಕೆಯಲ್ಲಿ, ಮರಣದ ನಂತರ ಏನಾಗುತ್ತದೆ ಎಂಬುದನ್ನು ಕುರಿತು ಹೆಚ್ಚಿನ ಗಲಿಬಿಲಿಯುಂಟು. ಕೆಲವರು ಹೇಳುವದೇನಂದರೆ ಮರಣದ ನಂತರ ಅಂತಿಮ ನ್ಯಾಯತೀರ್ಪಿನ ವರೆಗೆ ಪ್ರತಿಯೊಬ್ಬರೂ “ನಿದ್ರಿಸುವರು”, ಇದಾದನಂತರ ಪ್ರತಿಯೊಬ್ಬರನ್ನು ಪರಲೋಕ ಅಥವಾ ನರಕಕ್ಕೆ ಕಳುಹಿಸಲಾಗುತ್ತದೆ. ಬೇರೆ ಕೆಲವರು ನಂಬುವದೇನಂದರೆ ಮರಣದ ಸಮಯದಲ್ಲಿ, ಜನರಿಗೆ ತತ್ ಕ್ಷಣವೇ ತೀರ್ಪುಮಾಡಿ ತಮ್ಮ ನಿತ್ಯ ನಿರ್ಧಿಷ್ಟ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಇನ್ನು ಕೆಲವರು ಸಾಧಿಸುವದೇನಂದರೆ ಜನರು ಸತ್ತಾಗ, ಅಂತಿಮ ಪುನರುತ್ಥಾನಕ್ಕಾಗಿ, ಅಂತಿಮ ನ್ಯಾಯತೀರ್ಪಿಗಾಗಿ ಕಾದಿರುವಾಗ, ಅವರ ಪ್ರಾಣಗಳು/ಆತ್ಮಗಳು “ತಾತ್ಕಾಲಿಕ” ಪರಲೋಕ ಅಥವಾ ನರಕಕ್ಕೆ ಕಳುಹಿಸಲಾಗುತ್ತದೆ, ನಂತರ ಅವರ ನಿತ್ಯ ನಿರ್ಧಿಷ್ಟ ಸ್ಥಳಕ್ಕೆ ಕಳುಹಿಸಲಾಗುತ್ತದೆ ಹಾಗಾದರೆ, ಮರಣದ ನಂತರ ನಿಜವಾಗಿ ಏನಾಗುತ್ತದೆ ಎಂದು ಸತ್ಯವೇದ ಏನು ಹೇಳುತ್ತದೆ?

ಮೊದಲನೆಯದಾಗಿ, ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರುವ ವಿಶ್ವಾಸಿಗಳನ್ನು ಕುರಿತು ಸತ್ಯವೇದ ಹೇಳುವದೇನಂದರೆ, ಮರಣದ ನಂತರ ವಿಶ್ವಾಸಿಗಳ ಪ್ರಾಣಗಳು/ಆತ್ಮಗಳು ಪರಲೋಕಕ್ಕೆ ತೆಗೆದುಕೊಳ್ಳಲಾಗುವವು, ಯಾಕೆಂದರೆ ಅವರು ಕ್ರಿಸ್ತನನ್ನು ತಮ್ಮ ರಕ್ಷಕನನ್ನಾಗಿ ಸ್ವೀಕರಿಸಿದರಿಂದ ಅವರ ಪಾಪಗಳು ಕ್ಷಮಿಸಲ್ಪಟ್ಟಿವೆ (ಯೋಹಾನ 3:16, 18, 36). ವಿಶ್ವಾಸಿಗಳಿಗೆ, ಮರಣವೆಂದರೆ “ದೇಹದಿಂದ ದೂರವಾಗಿ ಕರ್ತನೊಂದಿಗೆ ಹತ್ತಿರವಾಗುವುದಾಗಿದೆ” (2 ಕೊರಿಂಥ 5:6-8; ಫಿಲಿಪ್ಪಿ 1:23). ಹೇಗಾದರೂ, 1 ಕೊರಿಂಥ 15:50-54 ಮತ್ತು 1 ಥೆಸಲೋನಿಕ 4:13-17 ಈ ವಾಕ್ಯಭಾಗಗಳು ವಿವರಿಸುವದೇನಂದರೆ ವಿಶ್ವಾಸಿಗಳು ಪುನರುತ್ಥಾನವಾಗುತ್ತಾರೆ ಮತ್ತು ಅವರಿಗೆ ಮಹಿಮೆಯ ದೇಹಗಳು ಕೊಡಲ್ಪಡುತ್ತವೆ. ಒಂದು ವೇಳೆ ವಿಶ್ವಾಸಿಗಳು ಮರಣದ ತಕ್ಷಣವೇ ಕ್ರಿಸ್ತನೊಂದಿಗೆ ಇರಲು ಹೋಗುವದಾದರೆ, ಈ ಪುನರುತ್ಥಾನದ ಉದ್ದೇಶವೇನಾಗಿದೆ? ಮರಣದ ತಕ್ಷಣವೇ ವಿಶ್ವಾಸಿಗಳ ಪ್ರಾಣಗಳು/ಆತ್ಮಗಳು ಕ್ರಿಸ್ತನೊಂದಿಗೆ ಇರಲು ಹೋಗುವದಾದರೆ, “ಶಾರೀರಿಕ” ದೇಹವು ಸಮಾಧಿಯಲ್ಲಿ ನಿದ್ರೆಮಾಡುತ್ತಾ ಇರುತ್ತದೆ. ವಿಶ್ವಾಸಿಗಳ ಪುನರುತ್ಥಾನದಲ್ಲಿ, ಶಾರೀರಿಕ ದೇಹವು ಪುನರುತ್ಥಾವಾಗುತ್ತದೆ, ಮಹಿಮೆಗೊಳ್ಳುತ್ತದೆ, ನಂತರ ಪ್ರಾಣ/ಆತ್ಮದೊಂದಿಗೆ ಪುನಃ ಐಕ್ಯಗೊಳ್ಳುತ್ತವೆ. ಈ ಪುನರ್ ಐಕ್ಯಗೊಂಡ ಮತ್ತು ಮಹಿಮೆಗೊಂಡ ದೇಹ-ಪ್ರಾಣ-ಆತ್ಮವು ಹೊಸ ಪರಲೋಕ ಮತ್ತು ಹೊಸ ಭೂಮಿಯಲ್ಲಿ ನಿತ್ಯತ್ವಕ್ಕಾಗಿ ವಿಶ್ವಾಸಿಗಳ ಸ್ವಾಧೀನವಾಗುತ್ತವೆ (ಪ್ರಕಟನೆ 21-22).

ಎರಡನೆಯದಾಗಿ, ಯೇಸು ಕ್ರಿಸ್ತನನ್ನು ತಮ್ಮ ರಕ್ಷಕನನ್ನಾಗಿ ಸ್ವೀಕರಿಸದೆ ಇದ್ದವರಿಗೆ, ಮರಣವೆಂದರೆ ನಿತ್ಯ ಶಿಕ್ಷೆಯಾಗಿದೆ. ಹೇಗಾದರೂ, ವಿಶ್ವಾಸಿಗಳ ನಿರ್ಧಿಷ್ಟ ಸ್ಥಳಕ್ಕೆ ಸಮನಾಗಿ, ಅವಿಶ್ವಾಸಿಗಳನ್ನು ಸಹ ಅಂತಿಮ ಪುನರುತ್ಥಾನಕ್ಕಾಗಿ, ಅಂತಿಮ ನ್ಯಾಯತೀರ್ಪಿಗಾಗಿ ಮತ್ತು ನಿತ್ಯ ನಿರ್ಧಿಷ್ಟ ಸ್ಥಳಕ್ಕಾಗಿ ಕಾದಿರುವಾಗ, ಅವರನ್ನು ತಕ್ಷಣವೇ ತಾತ್ಕಾಲಿಕ ಸ್ಥಳದಲ್ಲಿ ಇರಲು ಕಳುಹಿಸಲಾಗುತ್ತದೆ. ಲೂಕ 16:22-23 ವಿವರಿಸುವದೇನಂದರೆ ಐಶ್ವರ್ಯವಂತನನ್ನು ಮರಣದ ನಂತರ ತಕ್ಷಣವೇ ಶಿಕ್ಷಿಸಲಾಯಿತು. ಪ್ರಕಟನೆ 20:11-15 ವಿವರಿಸುವದೇನಂದರೆ ಸತ್ತ ಎಲ್ಲಾ ಅವಿಶ್ವಾಸಿಗಳನ್ನು ಪುನರುತ್ಥಾನಗೊಳಿಸಿ, ಬಿಳೀ ಮಹಾ ಸಿಂಹಾಸನದ ಬಳಿಯಲ್ಲಿ ನ್ಯಾಯತೀರ್ಪುಮಾಡಲಾಗುತ್ತದೆ, ಅನಂತರ ಬೆಂಕಿಯ ಕೆರೆಗೆ ದೊಬ್ಬಲಾಗುತ್ತದೆ. ಅವಿಶ್ವಾಸಿಗಳನ್ನು ಮರಣದ ನಂತರ ತಕ್ಷಣವೇ ನರಕಕ್ಕೆ (ಬೆಂಕಿಯ ಕೆರೆಗೆ) ಕಳುಹಿಸಲಾಗುವದಿಲ್ಲ, ಆದರೆ ನ್ಯಾಯತೀರ್ಪಿನ ಮತ್ತು ಖಂಡನೆಯ ಲೋಕದ ತಾತ್ಕಾಲಿಕ ಸ್ಥಳದಲ್ಲಿ ಇರುತ್ತಾರೆ. ಹೇಗಾದರೂ, ಅವಿಶ್ವಾಸಿಗಳನ್ನು ತಕ್ಷಣವೇ ಬೆಂಕಿಯ ಕೆರೆಗೆ ಕಳುಹಿಸದೆ ಇದ್ದರೂ ಸಹ, ಮರಣದ ನಂತರ ತಕ್ಷಣವೇ ಅವರ ವಿಧಿಯು ಒಳ್ಳೆಯದಲ್ಲ. ಐಶ್ವರ್ಯವಂತನು, “ನಾನು ಈ ಬೆಂಕಿಯ ಸಂಕಟದಲ್ಲಿದ್ದೇನೆ” ಎಂದು ಗೋಳಾಡಿ ಅತ್ತನು (ಲೂಕ 16:24).

ಆದುದರಿಂದ, ಮರಣದ ನಂತರ ಒಬ್ಬ ವ್ಯಕ್ತಿಯು “ತಾತ್ಕಾಲಿಕ” ಪರಲೋಕ ಅಥವಾ ನರಕದಲ್ಲಿ ವಾಸಿಸುತ್ತಾನೆ. ಈ ತಾತ್ಕಾಲಿಕ ಲೋಕದ ನಂತರ, ಅಂತಿಮ ಪುನರುತ್ಥಾನದಲ್ಲಿ, ಒಬ್ಬ ವ್ಯಕ್ತಿಯ ನಿತ್ಯ ನಿರ್ಧಿಷ್ಟ ಸ್ಥಳವು ಬದಲಾಗುವದಿಲ್ಲ. ಆ ನಿತ್ಯ ನಿರ್ಧಿಷ್ಟ ಸ್ಥಳದ ನಿಖರವಾದ “ಸ್ಥಳ”ವು ಬದಲಾಗತ್ತದೆ. ವಿಶ್ವಾಸಿಗಳು ಹೊಸ ಪರಲೋಕ ಮತ್ತು ಹೊಸ ಭೂಮಿಗೆ ಪ್ರವೇಶಿಸಲು ಅಂತಿಮವಾಗಿ ಅನುಗ್ರಹವಾಗುತ್ತದೆ (ಪ್ರಕಟನೆ 21:1). ಅವಿಶ್ವಾಸಿಗಳನ್ನು ಅಂತಿಮವಾಗಿ ಬೆಂಕಿಯ ಕೆರೆಗೆ ದೊಬ್ಬಲಾಗುತ್ತದೆ (ಪ್ರಕಟನೆ 20:11-15). ರಕ್ಷಣೆಗಾಗಿ ಅವರು ಯೇಸು ಕ್ರಿಸ್ತನಲ್ಲಿ ಭರವಸೆಯಿಟ್ಟಿದ್ದಾರೋ ಅಥವಾ ಇಲ್ಲವೋ ಎಂಬುದರ ಆಧಾರದ ಮೇಲೆ – ಇವು ಎಲ್ಲಾ ಜನರ ಅಂತಿಮ, ನಿತ್ಯ ನಿರ್ಧಿಷ್ಟ ಸ್ಥಳವಾಗಿರುತ್ತದೆ ( ಮತ್ತಾಯ 25:46; ಯೋಹಾನ 3:36).

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ಮರಣದ ನಂತರ ಏನಾಗುತ್ತದೆ?
Facebook icon Twitter icon Pinterest icon Email icon
© Copyright Got Questions Ministries